ಎಂ. ಟಿ. ವಿ. ಆಚಾರ್ಯ (ಜುಲೈ ೨೦, ೧೯೨೦ - ೧೯೯೨) ಮೈಸೂರು ಶೈಲಿಯ ಮಹಾನ ಚಿತ್ರಕಲಾವಿದರೆನಿಸಿದ್ದು, ಚಂದಮಾಮ ಪತ್ರಿಕೆಯಲ್ಲಿನ ತಮ್ಮ ಸುಂದರ ವರ್ಣಚಿತ್ರಗಳಿಂದ 'ಚಂದಾಮಾಮ ಆಚಾರ್ಯರೆಂದೇ ಮನೆಮಾತಾಗಿದ್ದವರು ಚಂದಮಾಮ ಎಂದರೆ ಮೊದಲು ನೆನಪಾಗುವುದು ಅದರಲ್ಲಿನ ಸುಂದರ ಚಿತ್ರಗಳು ಮತ್ತು ಮೋಹಕ ಕಥೆಗಳು. ಇಪ್ಪತ್ತನೆಯ ಶತಮಾನದ ದ್ವಿತೀಯ ಭಾಗದಲ್ಲಿ ಈ ಚಂದಮಾಮ ಓದದೆ, ಅದರಲ್ಲಿನ ಕಥೆ ಕೇಳದೆ, ಅದರಲ್ಲಿನ ಚಿತ್ರಗಳನ್ನು ನೋಡದ ಮಕ್ಕಳೇ ಇರಲಿಲ್ಲ. ಚಂದಮಾಮದ ನೆನಪನ್ನು ಮುದವಾಗಿ ಉಳಿಸಿರುವ ವರ್ಣ ಚಿತ್ರಗಳಲ್ಲಿ ಕನ್ನಡಿಗರಾದ ಎಂ. ಟಿ. ವಿ. ಆಚಾರ್ಯರ ಕೊಡುಗೆಯೂ ಪ್ರಧಾನವಾದುದು. == ಜೀವನ == ಚಂದಮಾಮ ಆಚಾರ್ಯರೆಂದೇ ಪ್ರಖ್ಯಾತರಾಗಿದ್ದ ಎಂ.ಟಿ. ವಿ. ಆಚಾರ್ಯರು ಜನಿಸಿದ ದಿನ ಜುಲೈ ೨೦, ೧೯೨೦. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಆಚಾರ್ಯರ ಚಿತ್ರಗಳು ಮೈಸೂರು ದಸರಾ ಪ್ರದರ್ಶನ ಸಂದರ್ಭದಲ್ಲಿ ಬಹುಮಾನ ಗಳಿಸುತ್ತಿದ್ದವು. ಆಚಾರ್ಯರು ಕೆಲವು ಕಾಲ ಬೆಂಗಳೂರಿನ ಎಚ್.ಎ.ಎಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. == ಚಂದಮಾಮ ಆಚಾರ್ಯ == ೧೯೪೫ರ ವರ್ಷದಲ್ಲಿ ಅವರ ಚಿತ್ರ ಪ್ರದರ್ಶನವು ಚೆನ್ನೈನಲ್ಲಿ ಏರ್ಪಾಡಾಗಿತ್ತು. ಆ ಖ್ಯಾತಿ ಅವರನ್ನು ೧೯೪೭ರ ವರ್ಷದಲ್ಲಿ ಆ ಕಾಲದಲ್ಲಿ ತಮಿಳಿನಲ್ಲಿ ಮಾತ್ರ ಪ್ರಸಾರವಾಗುತ್ತಿದ್ದ ‘ಚಂದಮಾಮ’ ಮಾಸಪತ್ರಿಕೆಗೆ ಕರೆದು ತಂದಿತು. ಮುಂದೆ ಅವರು ಕನ್ನಡ ಚಂದಮಾಮ ಅವತರಣಿಕೆ ಪ್ರಾರಂಭಗೊಂಡಾಗ ಅದರ ಸಂಪಾದಕರಾದರು. ಚಂದಮಾಮ ಪತ್ರಿಕೆಗಾಗಿ ಆಚಾರ್ಯ ಮತ್ತು (ವಿಕ್ರಂ ಬೇತಾಳ ಚಿತ್ರ ಖ್ಯಾತಿಯ) ಶಂಕರ್ ಅವರುಗಳು ಬಹಳಷ್ಟು ಪ್ರಖ್ಯಾತ ಚಿತ್ರಗಳನ್ನು ಮೂಡಿಸುತ್ತಿದ್ದರು. == ತಾಯಿ ನಾಡು ಪತ್ರಿಕೆಯಲ್ಲಿ == ಎಂ. ಟಿ. ವಿ. ಆಚಾರ್ಯರು ೧೯೬೩ರಿಂದ ೧೯೬೫ರ ವರ್ಷಗಳಲ್ಲಿ ‘ತಾಯಿ ನಾಡು’ ಪತ್ರಿಕೆಯ ಕಲಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. == ಆಚಾರ್ಯ ಚಿತ್ರಕಲಾ ಭವನ == ಮುಂದೆ ಆಚಾರ್ಯರು ‘ಆಚಾರ್ಯ ಚಿತ್ರಕಲಾ ಭವನ’ ಎಂಬ ಅಂಚೆಯ ಮೂಲಕ ಕಲಾ ಶಿಕ್ಷಣವನ್ನು ನೀಡುವ ಶಾಲೆಯನ್ನು ಪ್ರಾರಂಭಿಸಿ ಸಹಸ್ರಾರು ಜನರಿಗೆ ಚಿತ್ರಕಲೆಯಲ್ಲಿ ಆಸಕ್ತಿ ಮೂಡಲು ಪ್ರೇರಕರೂ ಮಾರ್ಗದರ್ಶಿಗಳೂ ಆದರು. == ವಿದಾಯ == ಈ ಕಲಾಚಾರ್ಯ ಎಂ.ಟಿ.ವಿ. ಆಚಾರ್ಯರು ೧೯೯೨ರ ವರ್ಷದಲ್ಲಿ ಈ ಲೋಕವನ್ನಗಲಿದರು.